ಕೊಲಂಬೋ

ಶ್ರೀಲಂಕಾ ಗಣರಾಜ್ಯದ ರಾಜಧಾನಿ; ಅದರ ಮುಖ್ಯ ರೇವುಪಟ್ಟಣ; ಕೊಲಂಬೋ ಜಿಲ್ಲೆಯ ಆಡಳಿತ ಕೇಂದ್ರ. ಪಶ್ಚಿಮತೀರದಲ್ಲಿ ಕೆಳನಿ ನದೀಮುಖಕ್ಕೆ ದಕ್ಷಿಣದಲ್ಲಿದೆ. ಜನಸಂಖ್ಯೆ 5,10,947(1963). ನಗರದ ಸುತ್ತಮುತ್ತ ತಗ್ಗುಭೂಮಿ ಇರುವುದರಿಂದ ಪ್ರವಾಹದಿಂದ ರಕ್ಷಣೆಗೆ ಕ್ರಮಕೈಗೊಳ್ಳಲಾಗಿದೆ. ಇಲ್ಲಿಯದು ಉಷ್ಣತೆಯ ವಾಯುಗುಣ. ಹವೆಯಲ್ಲಿ ತೇವದ ಅಂಶ ಹೆಚ್ಚು. ಮಧ್ಯಕ ಉಷ್ಣತೆ 880 ಫ್ಯಾ. ಮಧ್ಯ ಸರಾಸರಿ ವಾರ್ಷಿಕ ಮಳೆ 91". ನಗರದ ಹಳೆಯ ಭಾಗ ಪೇಟೆ, ಎರಡನೆಯ ಮಹಾಯುದ್ಧದ ತರುವಾಯ ವ್ಯಾಪಾರ ವೃದ್ಧಿಯಾಯಿತು. ಈಗಿನ ಬಂದರಿನ ದಕ್ಷಿಣ ತುದಿಯಲ್ಲಿರುವ ಪೋರ್ಚುಗೀಸರು ಕಟ್ಟಿದ ಕೋಟೆಯ ಭಾಗದಲ್ಲಿ ಆಡಳಿತ ಹಾಗೂ ವಾಣಿಜ್ಯ ಕಟ್ಟಡಗಳು ಕೇಂದ್ರೀಕೃತವಾಗಿವೆ. ನಗರದ ಆ ಭಾಗದಲ್ಲಿ ಅಧ್ಯಕ್ಷರ ಅಧಿಕೃತ ನಿವಾಸ ಮತ್ತು ಮುಖ್ಯ ಕಚೇರಿಗಳಿವೆ. ಹಿಂದೆ ಡಚ್ಚರ ನಿವಾಸವಾಗಿದ್ದ ಹಲ್‍ಟ್ಸ್‍ಡಾರ್ಫ್ ಬಡಾವಣೆಯಲ್ಲಿ ನ್ಯಾಯಾಲಗಳಿವೆ. ಡಚ್ಚರು ಕಟ್ಟಿಸಿದ ಚರ್ಚ್ ಇರುವುದು ಉಲ್ಪೆನ್‍ಡಾಲ್ ಬಡಾವಣೆಯಲ್ಲಿ. ಕೊಟಹೆನದಲ್ಲಿರುವ ಬೌದ್ಧ ದೇವಾಲಯ ಪ್ರಸಿದ್ಧವಾದ್ದು. ಕೊಚ್ಚಿಕಡೈಯ ಪೊನಾಂಬಲವನೇಶ್ವರ ದೇವಾಲಯ ಹಿಂದೂಗಳದು.

ಕೊಲಂಬೋ ಶ್ರೀಲಂಕಾದ ಪ್ರಮುಖ ವಿದ್ಯಾಕೇಂದ್ರ. 1942ರಲ್ಲಿ ಇಲ್ಲಿ ಸಿಲೋನ್ ವಿಶ್ವವಿದ್ಯಾಲಯ ಸ್ಥಾಪಿತವಾಯಿತು. ಇಲ್ಲಿಯ ವಿದ್ಯೋದಯ ಮತ್ತು ವಿದ್ಯಾಲಂಕಾರ ಬೌದ್ಧ ವಿದ್ಯಾಪೀಠಗಳು ವಿಶ್ವವಿದ್ಯಾಲಯ ಸ್ಥಾನಮಾನಗಳನ್ನು ಪಡೆದಿರುವ ಸಂಸ್ಥೆಗಳು. ವಿದ್ಯೋದಯ ವಿಶ್ವವಿದ್ಯಾಲಯ ನಗರದೊಳಗಿದೆ; ವಿದ್ಯಾಲಂಕಾರ ವಿಶ್ವವಿದ್ಯಾಲಯ ನಗರಕ್ಕೆ ನಾಲ್ಕು ಮೈಲಿ ದೂರದಲ್ಲಿರುವ ಕೆಳನಿಯದಲ್ಲಿದೆ. ಕೆಳನಿಯ ಬೌದ್ಧ ಯಾತ್ರಾಸ್ಥಳ. ಕೊಲಂಬೋ ನಗರದಲ್ಲಿ ಪ್ಯಾಸ್ಚರ್ ಸಂಸ್ಥೆ, ವೈದ್ಯಕೀಯ ಸಂಶೋಧನ ಸಂಸ್ಥೆ ಮತ್ತು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನ ಸಂಸ್ಥೆಗಳು ಇವೆ.

ಕೊಲಂಬೋ ನಗರದ ಸ್ವಾತಂತ್ರ್ಯ ಚೌಕದಲ್ಲಿ ನಿರ್ಮಿತವಾಗಿರುವ ಸ್ವಾತಂತ್ರ್ಯ ಭವನ ಕಾಂಡ್ಯನ್ ಶೈಲಿಯಲ್ಲಿ ನಿರ್ಮಿತವಾಗಿದೆ. ನಗರದ ದಕ್ಷಿಣದಲ್ಲಿರುವ ಆಧುನಿಕ ನಿವಾಸಭಾಗ ಸಮುದ್ರಕ್ಕೂ ಅದಕ್ಕೆ ಸಮಾಂತರದಲ್ಲಿರುವ ಇಳಿಭೂಮಿಗೂ ನಡುವೆ ಉದ್ದಕ್ಕೆ ಹಬ್ಬಿದೆ. ಕೋಟೆಯ ದಕ್ಷಿಣಕ್ಕಿರುವ ಗಾಲ್ ಫೇಸ್ ಎಸ್‍ಪ್ಲನೇಡ್ ಅಲ್ಲದೆ, ವಿಕ್ಟೋರಿಯ, ಕ್ಯಾಂಬೆಲ್, ಹ್ಯಾವಲಾಕ್ ಉದ್ಯಾನಗಳೂ ಕುದುರೆ ಪಂದ್ಯದ ಮೈದಾನವೂ ರಿಜ್‍ವೇ ಗಾಲ್ಫ್ ಆಟದ ಸರಪಳಿ ನೆಲವೂ ಕೊಲಂಬೋ ಓವಲ್ ಕ್ರಿಕೆಟ್ ಮೈದಾನವೂ ಇವೆ. ಲಾವಿನೇಯ ಶಿಖರ ಒಂದು ವಿಹಾರ ಸ್ಥಳ. ಸಮುದ್ರಸ್ನಾನಕ್ಕೆ ಪ್ರಶಸ್ತ. ಕೊಲಂಬೋ ಬಂದರಿಗೆ 5 ಮೈ. ದೂರದಲ್ಲಿರುವ ಕೋಟ್ಟೆ ಉಪನಗರಭಾಗ ಹಿಂದಣ ಸಿಂಹಳ ಅರಸರ ರಾಜಧಾನಿಗಳಲ್ಲಿ ಒಂದು. ಬಂದರಿಗೆ ಉತ್ತರದಲ್ಲಿರುವ ಮುತ್ವಾಲ್ ಬಡಾವಣೆಯಲ್ಲಿ ಬೆಸ್ತರು ವಾಸಿಸುತ್ತಾರೆ. ಅವರಲ್ಲಿ ಅನೇಕರು ರೋಮನ್ ಕೆಥೊಲಿಕ್ ಮತಕ್ಕೆ ಸೇರಿದವರು.

ಕೊಲಂಬೋದಿಂದ ಜಾಫ್ನ, ಟ್ರಿಂಕಾಮಲಿ ಮೊದಲಾದ ನಗರಗಳಿಗೆ ರೈಲ್ವೆ ಸಂಪರ್ಕವುಂಟು. ಕೆಳನಿ ನದಿಗೆ ಅಡ್ಡಲಾಗಿರುವ ವಿಕ್ಟೋರಿಯ ಸೇತುವೆಯ ಮೂಲಕ ಉತ್ತರದಲ್ಲಿರುವ ನೆಗೊಂಬೊ ಮತ್ತು ಜಾಫ್ನಗಳಿಗೂ ವಾಯವ್ಯದಲ್ಲಿರುವ ಕ್ಯಾಂಡಿಗೂ ರಸ್ತೆಗಳಿವೆ. ದಕ್ಷಿಣದ ಮುಖ್ಯ ರಸ್ತೆಗಳು ಸಮುದ್ರದ ಕರೆಯಲ್ಲೇಸಾಗಿ ಹಂಬನ್ ತೋಟ ಮತ್ತು ಕೆಳನಿ ಕಣಿವೆಯ ಮೂಲಕ ಅವಿಸ್ಸವೆಲ್ಲಕ್ಕೆ ಹೋಗುತ್ತವೆ. ರತ್ಮಲನ ವಿಮಾನ ನಿಲ್ದಾಣದಿಂದ ರಾಜ್ಯದ ಪ್ರಾಂತೀಯ ಕೇಂದ್ರಗಳಿಗೂ ಭಾರತಕ್ಕೂ ವಿಮಾನಗಳು ಹೋಗಿಬರುತ್ತವೆ. ಕಾಟುನಾಯಕ ವಿಮಾನ ನಿಲ್ದಾಣವಿರುವುದು ಭಾರಿ ವಿಮಾನಗಳಿಗಾಗಿ, ಅದು ನಗರಕ್ಕೆ 18 ಮೈ. ದೂರದಲ್ಲಿದೆ.

ಕೊಲಂಬೋ ಬಂದರಿಗೆ ಪ್ರಾಮುಖ್ಯ ಪ್ರಾಪ್ತವಾದ್ದು 1874ರಿಂದೀಚೆಗೆ. ಅದಕ್ಕೆ ಮುಂಚೆ ಗ್ಯಾಲ್ ಮುಖ್ಯ ಬಂದರಾಗಿತ್ತು. ಅದು ಕೊಲಂಬೋಗೆ ದಕ್ಷಿಣದಲ್ಲಿ 70 ಮೈ. ದೂರದಲ್ಲಿದೆ. ಕೊಲಂಬೋ ಬಂದರಿನ ನಿರ್ಮಾಣಕಾರ್ಯ ಆರಂಭವಾದ್ದು 1874ರಲ್ಲಿ. ಈಗ ಅದು ವಿಶ್ವದ ಅತ್ಯಂತ ದೊಡ್ಡ ಕೃತಕ ಬಂದರುಗಳಲ್ಲಿ ಒಂದು. ಆದರೂ 1950ರ ವರೆಗೆ ಇಲ್ಲಿ ಅನೇಕ ಸೌಲಭ್ಯಗಳಿರಲಿಲ್ಲ. 1957ರ ಹೊತ್ತಿಗೆ ಕ್ವೀನ್ ಎಲಿಜûಬೆತ್, ಪ್ರಿನ್ಸ್ ವಿಜಯ, ಡೆಲ್‍ಫ್ಟ್ ಮತ್ತು ಮುತ್ವಾಲ್ ಹಡಗು ಭರತಿ ಕಟ್ಟೆಗಳು ನಿರ್ಮಾಣವಾದುವು. ಜಲಮಟ್ಟಕ್ಕೆ 34' ತಳಕ್ಕೆ ಇಳಿದು ಚಲಿಸುವ ಜಹಜುಗಳು ಪಶ್ಚಿಮ ನಾಲೆಯಿಂದಲೂ, 29' ತಳಕ್ಕೆ ಇಳಿದು ಚಲಿಸುವ ಜಹಜುಗಳು ಉತ್ತರದ ನಾಲೆಯಿಂದಲೂ ರೇವಿನೊಳಕ್ಕೆ ಪ್ರವೇಶಿಸಬಹುದು. ಈಶಾನ್ಯ ಮಾರುತಗಳ ಕಾಲದಲ್ಲಿ 45 ಹಡಗುಗಳೂ, ನೈಋತ್ಯ ಮಾರುತಗಳ ಕಾಲದಲ್ಲಿ 39 ಹಡಗುಗಳೂ ಕೊಲಂಬೋ ಬಂದರಿನಲ್ಲಿ ನಿಲ್ಲಲು ಸ್ಥಳಾವಕಾಶವಿದೆ. ಬೇರ ಸರೋವರ, ಆ ಸರೋವರಕ್ಕೂ ಬಂದರಿಗೂ ಸಂಪರ್ಕ ಕಲ್ಪಿಸುವ ನಾಲೆ-ಇವೂ ಬಂದರಿಗೆ ಸೇರಿವೆ. ಈ ನಾಲೆಯಲ್ಲಿ 100 ಟನ್ ತೂಕದ ಸರಕು ದೋಣಿಗಳು ಸಂಚರಿಸಬಹುದು. ಕೊಲಂಬೋ ಸದಾ ಚಟುವಟಿಕೆಯಿಂದ ಕೂಡಿದ ರೇವು. ಚಹ, ರಬ್ಬರ್, ಕಕೇವೊ, ತೆಂಗಿನ ಹುರಿ, ಕೊಬ್ಬರಿ ಮತ್ತು ತೆಂಗು ಇಲ್ಲಿಂದ ರಫ್ತಾಗುತ್ತವೆ. ಅಕ್ಕಿ, ಹತ್ತಿ, ಜವಳಿ, ಸಕ್ಕರೆ ಮತ್ತು ಯಂತ್ರೋಪಕರಣಗಳು ಆಮದು ಸರಕುಗಳು.

ಕೊಲಂಬೋ ಜಿಲ್ಲೆ: ಕೊಲಂಬೋ ಜಿಲ್ಲೆಯಲ್ಲಿ ಕೊಲಂಬೋ, ನಿಗಂಬೋ, ಮತ್ತು ಮೌಂಟ್ ಲವಿನೀಯ ಎಂಬ ಮೂರು ಪೌರಸಭೆಗಳಿವೆ. ಜಿಲ್ಲೆಯ ವಿಸ್ತೀರ್ಣ 808 ಚ.ಮೈ ಜನಸಂಖ್ಯೆ 17,08,726 (1953).
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ